ಟೈರೊತ್ರೈಸಿನ್
ಕೃಷಿ ಮಣ್ಣಿನಲ್ಲಿ ವಾಸಿಸುವ ಬ್ಯಾಸಿಲ್ಲಸ್ ಬ್ರೆವಿಸ್ ಎಂಬ ನಿರುಪದ್ರವಿ ಏಕಾಣುಜೀವಿಯಿಂದ ಉತ್ಪಾದಿತವಾಗುವ ಒಂದು ಪ್ರತಿಜೈವಿಕ. ಅಮೆರಿಕದ ರಾಕ್‍ಫೆಲ್ಲರ್ ಇನ್‍ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚಿನ ರೀನೆ ಡ್ಯೂಬಾಸ್ ಎಂಬ ವಿಜ್ಞಾನಿ ಬ್ಯಾಸಿಲ್ಲಸ್ ಬ್ರೆವಿಸ್ಸನ್ನು ಪ್ರಯೋಗಾಲಯದಲ್ಲಿ ಬಿತ್ತಿ ಕೃಷಿ ಮಾಡಿ ಅದರ ಮಾಧ್ಯಮದಿಂದ ಟೈರೋತ್ರೈಸಿನನ್ನು ಪ್ರಥಮವಾಗಿ ಪ್ರತ್ಯೇಕಿಸಿದ. ಇದು ಬೆಳ್ಳಗಿರುವ ಪುಡಿ. ನೀರಿನಲ್ಲಿ ಕರಗದ ಆದರೆ ಮಧ್ಯಸಾರದಲ್ಲಿ ದ್ರಾವಣವಾಗುವ ವಸ್ತು. ಇದರ ಬೃಹದಣು 24 ಆಮೈನೋ ಆಮ್ಲಗಳ ಜೋಡಣೆಯಿಂದಾದ ತುಂಡು ಸರಪಣಿಯಂತಿರುವ ಪಾಲಿಪೆಪ್ಟೈಡ್ ಆಗಿರಬೇಕು ಎಂದು ಪ್ರಯೋಗಗಳಿಂದ ತಿಳಿದು ಬಂದಿತ್ತು. ಇಂಥ ಸ್ಥಿರ ಅಣುರಚನೆಯ ವಸ್ತುವಾದ್ದರಿಂದ ಇದನ್ನು ಜಳಾವಿಗೊಳಿಸಿದರೂ ಇದರ ಸತ್ತ್ವನಾಶವಾಗದು ಎಂದೂ ತೋರಿಸಿದ್ದರು. ಮುಂದಿನ ಸಂಶೋಧನೆಗಳಿಂದ ಈ ವಸ್ತು ವಾಸ್ತವವಾಗಿ ಗ್ರ್ರಾಮಿಸೈಡಿನ್ ಮತ್ತು ಟೈರೊಸೈಡಿನ್ ಎಂಬ ಎರಡು ರಾಸಾಯನಿಕಗಳ 20% ಮತ್ತು 80% ಗಳ ಮಿಶ್ರಣವೆಂದು ಧೃಡಪಟ್ಟಿತು. ಗ್ರಾಮಿಸೈಡಿನ್ ಪ್ರಬಲ ವಸ್ತು. ಆದರೆ ಗ್ರಾಮ್ ಋಣಾಣುಗಳ ಮೇಲೆ ಇದರ ಪ್ರಭಾವ ಕಡಿಮೆ. ಟೈರೊಸೈಡಿನಿನ ಪ್ರಭಾವ ಹೆಚ್ಚು. ಬೈರೊತ್ರೈಸಿನ್ನು ಕೀತ ಹಾಗೂ ಕೊಳೆತ ಸ್ಥಿತಿಗಳಲ್ಲಿ ಕೂಡ ಪರಿಣಾಮಕಾರಿ. ನ್ಯೂಮೋಕಾಕೈ, ಸ್ಟಾಫಿಲೋಕಾಕೈ, ಸ್ಟ್ರೆಪ್ಟೋಕಾಕೈ, ಡಿಫ್ತಿರಿಯ ವಿಷಾಣು-ಇವುಗಳ ಚಯಾಪಚಯ ಕ್ರಿಯೆಗಳಲ್ಲಿ ಉತ್ಕರ್ಷಣ ರಂಜಕೀಕರಣ (ಆಕ್ಸಿಡೇಷನ್ ಫಾಸ್ಫಾರಿಲೇಷನ್) ಬಂಧವನ್ನು ಟೈರೊತ್ರೈಸಿನ್ ಛೇದಿಸುವುದರ ಮೂಲಕ ಆ ಸೂಕ್ಷ್ಮಾಣುಗಳ ಶ್ವಾಸಕ್ರಿಯೆ ಹಾಗೂ ಶಕ್ತಿಸಂಚಯಗಳಿಗೆ ಅಡ್ಡಿ ಉಂಟುಮಾಡಿ ಅವುಗಳಿಗೆ ಮಾರಕವಾಗುವುದು. ಅಲ್ಲದೆ ಈ ಸೂಕ್ಷ್ಮಾಣುಗಳಲ್ಲಿ ಪಿಷ್ಟ ವಸ್ತುಗಳ ಚಯಾಪಚಯ ಕ್ರಿಯೆಗೆ ಅಡ್ಡಿ ಮಾಡಿ ಅವುಗಳ ಬೆಳವಣಿಗೆಯನ್ನು ಗ್ರಾಮಿಸೈಡಿನ ತಡೆಹಿಡಿಯುತ್ತದೆ ಎಂದೂ ಗೊತ್ತಾಗಿದೆ. ಆದರೆ ಟೈರೊತ್ರೈಸಿನ್ನು ಜಠರರಸದಿಂದ ಜೀರ್ಣಿಸಲ್ಪಡುವುದರಿಂದ ಅದನ್ನು ಸೇವಿಸಿದರೆ ಪ್ರಯೋಜನವಾಗುವುದಿಲ್ಲ ಬದಲು ಮಧ್ಯಸಾರದ್ರಾವಣ ರೂಪದಲ್ಲಿ ಅದನ್ನು ಸೂಜಿಮದ್ದಾಗಿ ಕೊಡಬಹುದು. ಆದರೆ ಟೈರೋತ್ರೈಸಿನ್ ನಂಜುಕಾರಿ. ಯಕೃತ್ತು ಮೂತ್ರಪಿಂಡಗಳ ಕಾರ್ಯಕ್ಕೆ ಅಡ್ಡಬರುತ್ತದೆ. ವಾಸನೆಗೆಡಿಕೆ, ಅಂಗಗಳ ಒಳಗೆ ರಕ್ತಸ್ರಾವ ಮುಂತಾದವು ಉಂಟಾಗುತ್ತವೆ. ಈಗಾಗಿ ಟೈರೋತ್ರೈಸಿನ್ನನ್ನು ಆಂತರಿಕ ಔಷಧವನ್ನಾಗಿ ಉಪಯೋಗಿಸುವುದನ್ನು ನಿಲ್ಲಿಸಿದೆ. ಆದರೆ ದ್ರಾವಣ ಅಥವಾ ಮುಲಾಮು ರೀತಿಯಲ್ಲಿ ಹೊರಲೇಪನವಾಗಿ ಉಪಯೋಗಿಸುವುದುಂಟು. ಗಾಯ, ಕುರು, ಕೀತವ್ರಣ, ಎಲುಬಿನ ಉರಿಊತ, ಕಣ್ಣು ಕುಟಿಕೆ, ಗ್ರಾಮ್‍ಧನಾಣುಗಳಿಂದ ಉಂಟಾದ ಚರ್ಮರೋಗಗಳು, ಕಿವಿಮೂಗು ನೋವುಗಳು ಈ ಸಂದರ್ಭಗಳಲ್ಲಿ ಟೈರೊತ್ರೈಸಿನ್ ಉಪಯುಕ್ತ. ಗಂಟಲು ನೋವು ಮತ್ತಿತರ ಗಂಟಲು ಬೇನೆಗಳಲ್ಲಿ ಸೀಚೀಪು ರೂಪದಲ್ಲಿ (ಲಾಸೆಂಜಸ್) ಇದನ್ನು ಉಪಯೋಗಿಸುವುದು ಸಾಮಾನ್ಯ.
(ಎಸ್.ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ